8 ಹಾರ್ಡ್ ಡ್ರೈವ್ ಗಳು ನಾಶ, ಸುಶಾಂತ್ ಕೇಸ್ ದಿನಕ್ಕೊಂದು ಟ್ವಿಸ್ಟ್...

 ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಹಲವು ಆಯಾಮಗಳಲ್ಲಿ, ಹಲವರನ್ನು ವಿಚಾರಣೆಗೆ ಒಳಪಡಿಸುತ್ತಿದೆ.

ಸುಶಾಂತ್​ ಸಾವಿನ ಕೇಸ್​​ಗೆ ಪ್ರತಿದಿನವೂ ಒಂದಲ್ಲ ಒಂದು ಹೊಸ ಹಾಗೂ ಕುತೂಹಲ, ಅಚ್ಚರಿ ಮೂಡಿಸುವ ಟ್ವಿಸ್ಟ್​ ಸಿಗುತ್ತಿದ್ದು, ಇಂದು ಸಿಬಿಐ ವಿಚಾರಣೆಗೆ ಒಳಪಟ್ಟ ಸುಶಾಂತ್​ ಅವರ ಸ್ನೇಹಿತ ಸಿದ್ಧಾರ್ಥ್​ ಪಿಠಾಣಿ ಇಂದು ಮತ್ತೊಂದು ಸ್ಫೋಟಕ ಸತ್ಯ ಬಾಯ್ಬಿಟ್ಟಿದ್ದಾರೆ ಎಂದು ವರದಿಯಾಗಿದೆ.

ಜೂ.14ರಂದು ಸುಶಾಂತ್ ಮೃತಪಟ್ಟಿದ್ದಾರೆ. ಅವರ ನಿವಾಸದಿಂದ ಜೂ.8ರಂದು ರಿಯಾ ಚಕ್ರವರ್ತಿ ತೆರಳಿದ್ದಾರೆ. ಆದರೆ ರಿಯಾ, ಸುಶಾಂತ್​ ಮನೆಯಿಂದ ವಾಪಸ್ ಹೋಗುವ ಮೊದಲು 8 ಹಾರ್ಡ್​ ಡ್ರೈವ್​​ಗಳನ್ನು ನಾಶ ಮಾಡಲಾಗಿದೆ ಎಂಬ ವಿಚಾರವನ್ನು ಸಿದ್ಧಾರ್ಥ್​ ಸಿಬಿಐಗೆ ತಿಳಿಸಿದ್ದಾರೆ.

ಜೂ.8ರಂದು ರಿಯಾ, ಸುಶಾಂತ್ ಮನೆಯಿಂದ ಹೊರಹೋಗುವ ಮೊದಲು ಇವರಿಬ್ಬರ ಮಧ್ಯೆ ಜಗಳ ನಡೆದಿದೆ.

ಹಾಗೆ, 8 ಹಾರ್ಡ್​ ಡ್ರೈವ್​​ಗಳನ್ನೂ ನಾಶ ಮಾಡಲಾಗಿದೆ. ಆದರೆ ಈ ಡ್ರೈವ್​​ನಲ್ಲಿ ಏನಿತ್ತು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸಿದ್ದಾರ್ಥ್​ ಹೇಳಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಈ ಹಾರ್ಡ್​ ಡ್ರೈವ್​​ಗಳಲ್ಲಿರುವ ವಿಷಯಗಳನ್ನು ಸಂಪೂರ್ಣವಾಗಿ ತೊಡೆದು ಹಾಕುವಾಗ ಅಲ್ಲೊಬ್ಬ ಐಟಿ ವೃತ್ತಿಪರರೂ ಇದ್ದರು. ಅವರನ್ನು ಯಾರು ಕರೆಸಿದ್ದಾರೆ ಎಂಬುದೂ ನನಗೆ ಗೊತ್ತಿಲ್ಲ. ಹಾರ್ಡ್​ ಡ್ರೈವ್​​ಗಳನ್ನು ನಾಶ ಮಾಡುವಾಗ ಸುಶಾಂತ್​ ಮತ್ತು ರಿಯಾ ಇಬ್ಬರೂ ಒಂದು ಕೋಣೆಯಲ್ಲಿ ಕುಳಿತು ನೋಡುತ್ತಿದ್ದರು. ಹಾಗೇ, ಮನೆಯ ಕೆಲಸದವರಾದ ದೀಪೇಶ್​ ಸಾವಂತ್​ ಮತ್ತು ಅಡುಗೆಯವನಾದ ನೀರಜ್​ ಸಿಂಗ್​ ಕೂಡ ಅಲ್ಲಿಯೇ ಇದ್ದರು ಎಂದು ಸಿದ್ದಾರ್ಥ್​ ಮಾಹಿತಿ ನೀಡಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಇನ್ನೊಮ್ಮೆ ಸಿದ್ದಾರ್ಥ್​ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಲಿದೆ ಎಂದು ಹೇಳಲಾಗಿದೆ. 


Comments